ಸ್ಥವಿರ ಗಿರಿಯ...

- ಪು.ತಿ. ನರಸಿಂಹಾಚಾರ್
ಸ್ಥವಿರ ಗಿರಿಯ ಚಲನದಾಸೆ ಮೂಕ ವನದ ಗೀತದಾಸೆ
ಸೃಷ್ಟಿ ಹೊರೆಯ ಹೊತ್ತ ತಿರೆಯ ನಗುವಿನಾಸೆ ನಾ ||
ಬಾಳ್ವೆಗೆಲ್ಲ ನಾನೇ ನೆಚ್ಚು ಲೋಕಕೆಲ್ಲ ಅಚ್ಚು ಮೆಚ್ಚು
ನಾನೆ ನಾನೆ ವಿಧಿಯ ಹುಚ್ಚು ಹೊನಲ ರಾಣಿ ನಾ

ಕಿರಣ ನೇಯ್ದ ಸರಿಗೆಯುಡಿಗೆ ಇರುಳು ಕೊಟ್ಟ ತಾರೆ ತೊಡಿಗೆ
ಇಂದು ಕಳೆಯ ಹೂವೆ ಮುಡಿಗೆ ದೇವಕನ್ಯೆ ನಾ
ಬೆಳ್ಳಿ ನೊರೆಯ ನಗೆ ನಗುತ್ತ ತೆರೆಯ ನಿರಿಯ ಚಿಮುಕಿಸುತ್ತ
ಕಡಲ ವರಿಸೆ ತವಕಿಸುತ್ತ ನಡೆವ ವಧುವೆ ನಾ

ಲಲಿತ ಕುಣಿತವೆನ್ನ ಶೀಲ ಚಲನವೆನ್ನ ಜೀವಾಳ
ಲುಪ್ತಮಾಗೆ ದೇಶ ಕಾಲ ಎನ್ನ ಗಾಯನ
ದಡದ ಗಿಡಕೆ ಪುಷ್ಪಹಾಸ ಸನಿಹ ದಿಳೆಗೆ ಸಸ್ಯಹಾಸ
ಹಾಸಕೀರ್ಣ ಹಾಸಪೂರ್ಣ ಎನ್ನ ಜೀವನ

ನಾನು ನಿಲ್ವುದೊಂದೆ ಚಣಂ ಸತತ ಕರ್ಮವೆನ್ನ ಗುಣಂ
ಅದಕೆ ಕಾಣೆ ಗೋಡ ನಡಂ ಹರ್ಷ ಮೆನಗೆ ಚಿರಂತನಂ
ಗವಿಗಳಲ್ಲಿ ಹುಲ್ಲನಡಗಿ ಬಂಡೆ ಮೇಲೆ ಹೂವ ನೆರಗಿ
ಮಡುವೆನಿಂದ ಮೆಲನೆ ಜರುಗಿ ಕಡಲಿಗೋಡುವೆ

ಅಜರ ಜಗದ ಚಲನದಾಸೆ ಮೂಕ ಜಗದ ಗೀತದಾಸೆ
ನಿಯತಿ ನಿಯಮ ನಿಯತ ಜಗದ ನಗುವಿನಾಸೆ ನಾ
ವನ ವಿನೋದ ಮಲೆ ಆಮೋದ ಮುಗಿಲ ಮೇಲ್ಮೆ ನಾಡ ನಲ್ಮೆ
ನಾನೆ ನಾನೆ ವಿವದ ಒಲುಮೆ ಹೊನಲ ರಾಣಿ ನಾ

Video link:
http://www.youtube.com/watch?v=VZJssAPW6zg
Audio link:
http://www.kannadaaudio.com/Songs/Bhaavageethe/home/HonalaHaadu.php
English lyrics:
http://www.madhurabhavageethegalu.blogspot.com/2012/09/sthavira-giriya-honala-haadu.html

No comments:

Post a Comment

Note: Only a member of this blog may post a comment.