ಮತ್ತದೇ ಬೇಸರ...

- ಕೆ.ಎಸ್. ನಿಸ್ಸಾರ್ ಅಹ್ಮೆದ್
ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ
ನಿನ್ನ ಜೊತೆ ಇಲ್ಲದೆ ಮಾತಿಲ್ಲದೆ ಮನ ವಿಭ್ರಾಂತ ||

ಕಣ್ಣನೆ ದಣಿಸುವ ಈ ಪಡುವಣ ಬಾನ್ ಬಣ್ಣಗಳು
ಮಣ್ಣನೆ ಹೊನ್ನಿನ ಹಣ್ಣಾಗಿಸುವೀ ಕಿರಣಗಳು
ಹಚ್ಚನೆ ಹಸುರಿಗೆ ಹಸೆಯಿಡುತಿರುವೀ ಖಗ ಗಾನ
ಚಿನ್ನ ನೀನಿಲ್ಲದೆ ದಿಮ್ಮೆನ್ನುತಿದೆ ರಮ್ಯೋದ್ಯಾನ

ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ
ಬರುವೆಯೋ ಬಾರೆಯೋ ನೀನೆನ್ನುತಿದೆ ಸಂದೇಹ
ಮುತ್ತಿದಾಳಸ್ಯದ ಬಿಗಿ ಮೌನವ ಹೊಡೆದೋಡಿಸು ಬಾ
ಮತ್ತೆ ಆ ಸಮತೆಯ ಹಿರಿ ಬೇಲಿಯ ಸರಿ ನಿಲ್ಲಿಸು ಬಾ

ಬಣ್ಣ ಕಳೆದೊಡವೆಯ ತೆರೆ ಮಾಸುತಲಿದೆ ಸೂರ್ಯಾಸ್ತ
ನೋಡಗೊ ತಿಮಿರದ ಬಲೆ ಬೀಸಿದ ಇರುಳಿನ ಬೆಸ್ತ
ವೆಚ್ಚವಾಗುತ್ತಿದೆ ಸವಿ ಕ್ಷಣಗಳ ಧನ ದುಂದಾಗಿ
ನಲಿವಿನ ಗಳಿಕೆಗೆ ಬಳಸವುಗಳನೊಂದೊಂದಾಗಿ

Video link:
http://www.youtube.com/watch?v=osAj2Ucbk2M
Audio link:
http://www.kannadaaudio.com/Songs/Bhaavageethe/home/Legends-RatnamalaPrakash.php
English lyrics:
http://madhurabhavageethegalu.blogspot.com/2012/07/mattade-besara.html

No comments:

Post a Comment

Note: Only a member of this blog may post a comment.