ಜಯ ಭಾರತ ಜನನಿಯ...

-ಕುವೆಂಪು
ಜಯ ಭಾರತ ಜನನಿಯ ತನುಜಾತೆ ಜಯ ಹೇ! ಕರ್ನಾಟಕ ಮಾತೆ ||
ಜಯ ಸುಂದರ ನದಿವನಗಳ ನಾಡೆ ಜಯ ಹೇ! ರಸ ಋಷಿಗಳ ಬೀಡೆ
ಭೂದೇವಿಯ ಮಕುಟದ ನವಮಣಿಯೆ ಗಂಧದ ಚಂದನ ಹೊನ್ನಿನ ಗಣಿಯೆ
ರಾಘವ ಮಧುಸೂದನ-ರವತರಿಸಿದ ಭಾರತ ಜನನಿಯ ತನುಜಾತೆ

ಜನನಿಯ ಜೋಗುಳ ವೇದದ ಘೋಷ ಜನನಿಗೆ ಜೀವವು ನಿನ್ನಾವೇಶ
ಹಸುರಿನ ಗಿರಿಗಳ ಸಾಲೆ ನಿನ್ನಯ ಕೊರಳಿನ ಮಾಲೆ
ಕಪಿಲ ಪತಂಜಲ ಗೌತಮ ಜಿನನುತ ಭಾರತ ಜನನಿಯ ತನುಜಾತೆ
ಜಯ ಹೇ! ಕರ್ನಾಟಕ ಮಾತೆ

ಶಂಕರ ರಾಮಾನುಜ ವಿದ್ಯಾರಣ್ಯ ಬಸವೇಶ್ವರ ಮಧ್ವರ ದಿವ್ಯಾರಣ್ಯ
ರನ್ನ ಶಡಕ್ಷರಿ ಪೊನ್ನ ಪಂಪ ಲಕುಮಿಪತಿ ಜನ್ನ
ಕುಮಾರ ವ್ಯಾಸರ ಮಂಗಳ ಧಾಮ ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾನಂದ ಕಬೀರರ ಭಾರತ ಜನನಿಯ ತನುಜಾತೆ
ಜಯ ಹೇ! ಕರ್ನಾಟಕ ಮಾತೆ

ತೈಲಪ ಹೊಯ್ಸಳರಾಡಿದ ನಾಡೆ ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ ಕಾವೇರಿಯ ವರ ರಂಗ
ಚೈತನ್ಯ ಪರಮಹಂಸ ವಿವೇಕರ ಭಾರತ ಜನನಿಯ ತನುಜಾತೆ
ಜಯ ಹೇ! ಕರ್ನಾಟಕ ಮಾತೆ

ಸರ್ವ ಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ
ಹಿಂದು ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ಗೇಹ ಕನ್ನಡ ತಾಯಿಯ ಮಕ್ಕಳ ದೇಹ
ಭಾರತ ಜನನಿಯ ತನುಜಾತೆ ಜಯ ಹೇ! ಕರ್ನಾಟಕ ಮಾತೆ

Video link:
http://www.youtube.com/watch?v=srMNkUZ2zPs 
English lyrics:
http://madhurabhavageethegalu.blogspot.com/2012/07/jaya-bharata-jananiya.html

No comments:

Post a Comment

Note: Only a member of this blog may post a comment.