ಕಾಣದ ಕಡಲಿಗೆ...

- ಜಿ. ಎಸ್. ಶಿವರುದ್ರಪ್ಪ
ಕಾಣದ ಕಡಲಿಗೆ ಹಂಬಲಿಸಿದೆ ಮನ ||
ಕಾಣಬಲ್ಲೆನೆ ಒಂದು ದಿನ ?
ಕಡಲನು ಕೂಡಬಲ್ಲೆನೆ ಒಂದು ದಿನ ?

ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೋ ಅದು ಎಂತಿರುವುದೋ ಅದು
ನೋಡಬಲ್ಲೆನೆ ಒಂದು ದಿನ ?
ಕಡಲನು ಕೂಡಬಲ್ಲೆನೆ ಒಂದು ದಿನ ?

ಸಾವಿರ ಹೊಳೆಗಳು ತುಂಬಿ ಹರಿದರು
ಒಂದೇ ಸಮನಾಗಿಹುದಂತೆ
ಸುನೀಲ ವಿಸ್ತರ ತರಂಗ ಶೋಭಿತ
ಗಂಭೀರಾಂಭುಧಿ ತಾನಂತೆ
ಮುನ್ನೀರಂತೆ ಅಪಾರವಂತೆ
ಕಾಣಬಲ್ಲೆನೆ ಒಂದು ದಿನ ?
ಅದರೊಳು ಕರಗಲಾರೆನೆ ಒಂದು ದಿನ ?

ಜಟಿಲ ಕಾನನದ ಕುಟಿಲ ಪತಗಳಲಿ
ಹರಿವ ತೊರೆಯು ನಾನು
ಎಂದಿಗಾದರು ಕಾಣದ ಕಡಲನು
ಸೇರಬಲ್ಲೆನೆನು ?
ಸೇರಬಹುದೆ ನಾನು ?
ಕಡಲ ನೀಲಿಯೊಳು ಕರಗಬಹುದೆ ನಾನು ?
ಕಡಲ ನೀಲಿಯೊಳು ಕೂಡಬಲ್ಲೆನೆ ನಾನು ?

Video link:
http://www.youtube.com/watch?v=9iOc-DhJCUI
http://www.youtube.com/watch?v=vFXJRtsi2-c
English lyrics:
http://madhurabhavageethegalu.blogspot.com/2012/07/kaanada-kadalige.html

1 comment:

Note: Only a member of this blog may post a comment.