ಬಂಗಾರ ನೀರ...

- ದ.ರಾ. ಬೇಂದ್ರೆ
ಹೊಸ ದ್ವೀಪಗಳಿಗೆ ಹೊರಟಾನಾ ಬನ್ನೀ ಅಂದದೋ ಅಂದದಾ

ಬಂಗಾರ ನೀರ ಕಡಲಾಚೆ ಗೀಚೆಗಿದೆ ನೀಲ ನೀಲ ತೀರ ||
ಮಿಂಚು ಬಳಗ ತೆರೆ ತೆರೆಗಳಾಗಿ ಅಲೆಯುವುದು ಪುಟ್ಟ ಪೂರ
ಅದು ನಮ್ಮ ಊರು ಇದು ನಿಮ್ಮ ಊರು ತಮ್ ತಮ್ಮ ಊರು ಧೀರ
ಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ

ಕರೆ ಬಂದಿತಣ್ಣ ತೆರೆ ಬಂದಿತಣ್ಣ ನೆರೆ ಬಂದಿತಣ್ಣ ಬಳಿಗೆ
ಹರಿತದ ಭಾವ ಬೆರೆತದ ಜೀವ ಅದರೊಳಗೆ ಒಳಗೆ ಒಳಗೆ
ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್ ನಿಮ್ಮ ಆತ್ಮಗಳಿಗೆ
ಅಂಬಿಗನು ಬಂದ ನಂಬಿಗನು ಬಂದ ಬಂದದಾ ದಿವ್ಯ ಘಳಿಗೆ

ಇದು ಉಪ್ಪು ನೀರ ಕಡಲಲ್ಲೊ ನಮ್ಮ ಒಡಲಲ್ಲು ಇದರ ನೆಲೆಯು
ಕಂಡವರಿಗಲ್ಲೊ ಕಂಡವರಿಗಷ್ಟೇ ತಿಳಿದದಾ ಇದರ ಬೆಲೆಯು
ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲೇ ಮಾತ್ರ ಒಡೆಯುವುದು ಇದರ ಸೆಳೆಯು
ಕಣ್ಣರಳಿದಾಗ ಕಣ್ ಹೊರಳಿದಾಗ ಹೊಳೆಯುವುದು ಇದರ ಕಳೆಯು

ಬಂದವರ ಬಳಿಗೆ ಬಂದದಾ ಮತ್ತು ನಿಂದವರಾ ನೆರೆಗು ಬಂದದೋ ಬಂದದಾ
ನವ ಮನುವು ಬಂದ ಹೊಸ ದ್ವೀಪಗಳಿಗೆ ಹೊರಟಾನಾ ಬನ್ನೀ ಅಂದದೋ ಅಂದದಾ

Video link:
http://www.youtube.com/watch?v=e4r_jTKc53A
Audio link:
http://www.kannadaaudio.com/Songs/Bhaavageethe/home/Shraavana.php
English lyrics:
http://www.madhurabhavageethegalu.blogspot.com/2012/10/bangaara-neera.html

No comments:

Post a Comment

Note: Only a member of this blog may post a comment.