ಶಾನುಭೋಗರ ಮಗಳು...

- ಕೆ. ಎಸ್. ನರಸಿಂಹಸ್ವಾಮಿ
ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ ರತ್ನದಂತಹ ಹುಡುಗಿ ಊರಿಗೆಲ್ಲ
ಬಲು ಜಾಣೆ ಗಂಭೀರೆ ಹೆಸರು ಸೀತಾದೇವಿ ಹನ್ನೆರಡು ತುಂಬಿಹುದು ಮಧುವೆಯಿಲ್ಲ ||

ತಾಯಿಯಿಲ್ಲದ ಹೆಣ್ಣು ಮಿಂಚ ಬೀರುವ ಕಣ್ಣು ಒಮ್ಮೊಮ್ಮೆ ಕಣ್ಣೀರ ಸರಸಿಯಹುದು
ತಾಯಿಯಂದದಿ ಬಂದು ತಂಪನೆರೆಯುವುದೆಂದು ಇಂಥ ಬಾಳಿಗೆ ಒಲವೆ ನಿನ್ನ ಕನಸು
ಹತ್ತಿರದ ಕೆರೆಯಿಂದ ತೊಳೆದ ಬಿಂದಿಗೆಯೊಳಗೆ ನೀರ ತರುವಾಗವಳ ನೋಡಬೇಕು
ಕರುವನಾಡಿಸುವಾಗ ಮಲ್ಲಿಗೆಯ ಬನದೊಳಗೆ ಅವಳ ಗಂಡನ ಹೆಸರ ಕೇಳಬೇಕು

ಮೊನ್ನೆ ತಾವರೆಗೆರೆಯ ಜೋಯಿಸರ ಮೊಮ್ಮಗನು ಹೆಣ್ಣ ನೋಡಲು ಬಂದ ಅವರ ಮನೆಗೆ
ವೈದಿಕರ ಮನೆಗಳಲಿ ಊಟ ಹೊತ್ತಾಗುವುದು ಒಲ್ಲೆನೆಂದಳು ಸೀತೆ ಕೋಣೆಯೊಳಗೆ
ಮಗಳ ಮಾತನು ಕೇಳಿ ನಕ್ಕು ಬಿಟ್ಟರು ತಂದೆ ಒಳಗೆ ನಂದಾದೀಪ ನಂದಿ ಹೋಗಿ
ಫಲವ ನುಡಿದುದು ಹಲ್ಲಿ ಹೇಳಲೇನಿದೆ ಮುಂದೆ ತೆರಳಿದನು ಜೋಯಿಸನು ತಣ್ಣಗಾಗಿ

ಬೆಳಗಾಗ ಕೆರೆಯಬಳಿ ನನ್ನ ತಂಗಿಯ ಕಂಡು ಕನ್ನೆ ತೋರಿದಳಂತೆ ಕಾರಣವನು
ಹೊನ್ನೂರ ಕೇರಿಯಲಿ ಬಂದಿದ್ದ ಹೊಸ ಗಂಡು ತನ್ನ ಕೂದಲಿಗಿಂತ ಕಪ್ಪು ಎಂದು
ನಮ್ಮೂರಿನಕ್ಕರೆಯ ಸಕ್ಕರೆಯ ಬೊಂಬೆಯನು ನೋಡಬೇಕೆ ಇಂಥ ಕಪ್ಪು ಗಂಡು
ಶಾನುಭೋಗರ ಮನೆಯ ತೋರಣವೇ ಹೇಳುವುದು ಬಂದ ದಾರಿಗೆ ಸುಂಕವಿಲ್ಲವೆಂದು

ಶಾನುಭೋಗರ ಮಗಳು ರತ್ನದಂತಹ ಹುಡುಗಿ ಗಂಡು ಸಿಕ್ಕುವುದೊಂದು ಕಷ್ಟವಲ್ಲ
ಸರಿಯಾದ ಗಂಡೊದಗಿ ಹೆಣ್ಣು ಸುಖವಾಗಿರಲಿ ತಡವಾದರೇನಂತೆ ನಷ್ಟವಿಲ್ಲ

Video link:
http://www.youtube.com/watch?v=YZPcZl3uJz0
http://www.youtube.com/watch?v=RBbxFbf1c8I 
English lyrics:
http://www.madhurabhavageethegalu.blogspot.com/2012/06/shanubhogara-magalu.html

1 comment:

Note: Only a member of this blog may post a comment.