ಧರಣಿ ಮಂಡಲ...

- ಜನಪದ
ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಳಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲ ಗೌಡನು
ಬಳಸಿ ನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು

ಗೊಲ್ಲ ಕರೆದ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂತು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿ ಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಸಿಡಿದು ರೋಶದಿ ಮೊರೆಯುತಾ ಹುಲಿ
ಗುಡಿಗುಡಿಸಿ ಭೋರಿಡುತ ಚಂಗನೆ
ತುಡುಕಲೆರಗಿದ ರಭಸಕಂಜಿ
ಚೆದರಿ ಹೋದವು ಹಸುಗಳು

ಪುಣ್ಯಕೋಟಿ ಎಂಬ ಹಸುವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿ ತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಗ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಖುಳ್ಳ ವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆ ನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನಾಡುವೆ ಎಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಖ್ಯಾಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆ ಇಟ್ಟು
ಕಂದ ನಿನ್ನನು ನೋಡಿ ಹೋಗುವೆ
ನೆಂದು ಬಂದೆನು ದೊಡ್ಡಿಗೆ

ಆರ ಮೊಲೆಯನು ಕುಡಿಯಲಮ್ಮ
ಆರ ಸೇರಿ ಬದುಕಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರು ನನಗೆ ಹಿತವರು

ಅಮ್ಮಗಳಿರಾ ಅಕ್ಕಗಳಿರಾ
ಎನ್ನ ತಾಯೊಡ ಹುಟ್ಟು ಗಳಿರಾ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೋಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿ ರಕ್ತವಿದೆಕೋ
ಚಂಡ ವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತ ಕೇಳಿ
ಕಣ್ಣ ನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು?
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

ಪುಣ್ಯಕೋಟಿ ನಲಿದು ಕರುವಿಗೆ
ಉಣ್ಣಿಸೀತು ಮೊಲೆಯ ಬೇಗದಿ
ಚೆನ್ನ ಗೊಲ್ಲನ ಕರೆದು ತಾನು
ಮುನ್ನ ತಾದಿಂತೆಂದಿತು

ಎನ್ನ ವಂಶದ ಗೋವ್ಗಳೊಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ ಕೃಷ್ಣನ ಭಾಜಿಸಿರಿ

ಈವನು ಸೌಭಾಗ್ಯ ಸಂಪದ
ಭಾವ ಜಾತಿಪ ಕೃಷ್ಣನು

Video link:
http://www.youtube.com/watch?v=mUNtHRXyWXY
English lyrics:
http://www.madhurabhavageethegalu.blogspot.com/2012/08/dharani-mandala.html

No comments:

Post a Comment

Note: Only a member of this blog may post a comment.

Pages (31)1234 Next