ಅಳುವ ಕಡಲೊಳು...

- ಗೋಪಾಲ ಕೃಷ್ಣ ಅಡಿಗ
ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ
ಬಾಳ ಗಂಗೆಯ ಮಹಾಪೂರದೊಳು ಸಾವಿನೊಂದು ವೇಣಿ ||
ನೆರೆತಿದೆ ಬೆರೆತಿದೆ ಕುಣಿವ ಮೊರೆವ ತೆರೆ ತೆರೆಗಳೋಣಿಯಲ್ಲಿ
ಜನನ ಮರಣಗಳ ಉಬ್ಬು ತಗ್ಗು ಹೊರಳುರುಳು-ವಾಟವಲ್ಲಿ

ಆಸೆ ಬೂದಿ ತಳದಲ್ಲೂ ಕೆರಳುತಿದೆ ಕಿಡಿಗಳೆನಿತೊ ಮರಳಿ
ಮುರಿದು ಬಿದ್ದ ಮನ ಮರದ ಕೊರಡೊಳು ಹೂವು ಹೂವು ಅರಳಿ
ಕೂಡಲಾರ-ದೆದೆಯಾಳದಲ್ಲು ಕಂಡೀತು ಏಕ ಸೂತ್ರ
ಕಂಡುದುಂಟು ಬೆಸೆ ಬೆಸೆಗಳಲ್ಲು ಭಿನ್ನತೆಯ ವಿಕಟ ಹಾಸ್ಯ

ಆಸೆ ಎಂಬ ತಳವೊಡೆದ ದೋಣಿಯಲಿ ದೂರ ತೀರ ಯಾಣ
ಯಾರ ಲೀಲೆಗೋ ಯಾರೋ ಏನೋ ಗುರಿ ಇರದೆ ಬಿಟ್ಟ ಬಾಣ
ಇದು ಬಾಳು ನೋಡು ಇದ ತಿಳಿದೆದೆನೆಂದರೂ ತಿಳಿದ ಧೀರನಿಲ್ಲ
ಹಲವುತನದ ಮೈ ಮರೆಸುವಾಟವಿದು ನಿಜವು ತೋರದಲ್ಲ

ಬೆಂಗಾಡು ನೋಡು ಇದು ಕಾಂಬ ಬಯಲು ದೊರಕಿಲ್ಲ ಆದಿ ಅಂತ್ಯ
ಅದ ತಿಳಿದೆನೆಂದ ಹಲರುಂಟು ತಣಿದೆನೆಂದವರ ಕಾಣೆನಯ್ಯ
ಅರೆ ಬೆಳಕಿನಲ್ಲಿ ಬಾಳಲ್ಲಿ ಸುತ್ತಿ ನಾವೆಷ್ಟೋ ಮರೆತು ಮೆರೆದು
ಕೊನೆಗೆ ಕರಗುವೆವು ಮರಣ ತೀರ ಘನ ತಿಮಿರದಲ್ಲಿ ಬೆರೆತು

Video link:
http://www.youtube.com/watch?v=wRBAYySHw6w
Audio link:
http://www.kannadaaudio.com/Songs/Bhaavageethe/home/Rajahamsa.php 
English lyrics:
http://www.madhurabhavageethegalu.blogspot.com/2012/08/aluva-kadalolu.html 

No comments:

Post a Comment

Note: Only a member of this blog may post a comment.